ಮಾನಸಿಂಹ ರಾಜ -
	ಅಂಬೇರಿನ ಅಧಿಪ, ರಾಜಾ ಬಿಹಾರಿಮಲ್ಲನ ಮೊಮ್ಮಗ ಹಾಗೂ ಉತ್ತರಾಧಿಕಾರಿ. ರಾಜಾ ಭಗವಾನ್ ದಾಸನ ಸಾಕುಮಗ, 1562ರಲ್ಲಿ ಬಿಹಾರಿಮಲ್ಲ ಅಕ್ಬರನಿಗೆ ಶರಣಾಗಿ ತನ್ನ ಮಗಳನ್ನಿತ್ತು ವಿವಾಹ ಮಾಡಿಕೊಟ್ಟಾಗ, ಈತ ಅಕ್ಬರನ ಆಸ್ಥಾನ ಸೇರಿ ಪ್ರಭಾವಶಾಲಿಯಾಗಿ ಬೆಳೆದ. ಈತ ಸಾಹಸಿ ಹಾಗೂ ಸ್ವಾಮಿ ನಿಷ್ಠ. ಹಲವೆಡೆಗಳಲ್ಲಿ ಮೊಗಲ್ ಸೈನ್ಯದ ದಿಗ್ವಿಜಯಗಳಿಗೆ ಈತನೂ ಗಣನೀಯವಾಗಿ ಕಾರಣನಾದ. ಹಳದೀಘಾಟ್ ಕದನದಲ್ಲಿ (1576) ರಾಣಾ ಪ್ರತಾಪಸಿಂಹ ಗುಡ್ಡಗಾಡುಗಳಿಗೆ ತಲೆಮರೆಸಿಕೊಂಡು ಹೋದಾಗ ರಜಪೂತ ಮನೆತನದವನೇ ಆದ ಮಾನಸಿಂಹನ ಮೇಲೆ ಸುಲ್ತಾನನಿಗೆ ಸಂದೇಹ ಮೂಡಿದ್ದುಂಟು. 1599ರಲ್ಲಿ ಪ್ರತಾಪನ ಮಗ ಅಮರಸಿಂಹನನ್ನು ಈತ ಸೋಲಿಸಿದ. ಕಾಬೂಲ್, ಬಂಗಾಲದಲ್ಲಿ ಉಂಟಾದ ದಂಗೆಗಳನ್ನು ಹತ್ತಿಕ್ಕಲು ಅಕ್ಬರ್ ಈತನನ್ನು ಈ ಪ್ರದೇಶಗಳಿಗೆ ಕಳುಹಿಸಿದ. ಬೇನಾಪುರದ ಕದನದಲ್ಲಿ (1592) ಆಫ್‍ಘನ್‍ರ ವಿರುದ್ಧ ಜಯಗಳಿಸಿ, ಬಂಗಾಲದಿಂದ ಒರಿಸ್ಸದತ್ತ ಮುನ್ನಡೆದು ಖುರ್ದಾಪ್ರದೇಶದ ದೊರೆ ರಾಮಚಂದ್ರದೇವ ಶರಣಾಗುವಂತೆ ಮಾಡಿದ. ಬಂಗಾಲದಲ್ಲಿ ದಂಗೆ ಎದ್ದ ಉಸ್ಮಾನಖಾನನನ್ನು ಸದೆಬಡಿದು ದಂಗೆಯನ್ನು ಅಡಗಿಸಿದ (1599). 1612ರ ಸುಮಾರಿಗೆ ಅಹಮದ್ ನಗರದ ಮೇಲೆ ನಡೆದ ಆಕ್ರಮಣದಲ್ಲಿ ಈತನ ಪಾತ್ರವೂ ಇತ್ತು. ಈತ 1614ರಲ್ಲಿ ದಖನ್ನಿನಲ್ಲಿ ಮೃತನಾದ.

	ಮಾನಸಿಂಹ ಮೊಗಲ್ ಸಾಮ್ರಾಜ್ಯಷಾಹಿಯ ಪ್ರಮುಖ ಹಿಂದೂ ಬೆಂಬಲಿಗರಲ್ಲೊಬ್ಬ. ತನ್ನ ಸೋದರಳಿಯ ಖುಸ್ರಾವ್‍ಗೆ ಮೊಗಲ್ ಸಾಮ್ರಾಜ್ಯದ ಉತ್ತರಾಧಿಕಾರತ್ವ ದೊರಕಿಸಿ ಕೊಡಲು ಸಂಚುಹೂಡಿದ. ಆದರೆ ಈತನ ಪ್ರಯತ್ನ ಸಫಲವಾಗಲಿಲ್ಲ. ವಿದ್ಯಾ ಪ್ರೋತ್ಸಾಹಿಯಾಗಿದ್ದ ಈತ ಹಿಂದಿಯಲ್ಲಿ ಕಾವ್ಯ ರಚಿಸುತ್ತಿದ್ದನೆನ್ನಲಾಗಿದೆ.
(ಎಚ್.ಎಂ.ಎನ್.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ